ಗ್ರಾಮವೃತ್ತಿಗಳು -
	ಗ್ರಾಮಜೀವನ ಪರಾವಲಂಬನೆಯಿಲ್ಲದಂತೆ ಸುಸೂತ್ರವಾಗಿ ನಡೆಯಲು ಅಲ್ಲಿಯ ಜನ ಕೈಕೊಂಡು ನಡೆಸಿಕೊಂಡು ಬರುತ್ತಿರುವ ವೃತ್ತಿಗಳ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ವ್ಯಕ್ತಿ ಜೀವನದಲ್ಲಿ ಕುಟುಂಬ ಹೇಗೋ ಹಾಗೆ ಸಮಾಜ ಜೀವನದಲ್ಲಿ ಗ್ರಾಮ ಒಂದು ಮೂಲ ಘಟಕ. ವ್ಯವಸಾಯವನ್ನೇ ತಮ್ಮ ಮುಖ್ಯ ಕಸಬನ್ನಾಗಿ ಉಳ್ಳ ಗ್ರಾಮದ ಜನ ತಮ್ಮ ಮುಖ್ಯ ಕಸಬಿಗೆ ಹಾಗೂ ಅದಕ್ಕೆ ಪೋಷಕವಾಗಿರುವ ಇತರ ಉಪಕಸಬುಗಳಿಗೆ ಗಮನ ಕೊಡುತ್ತ ಬಂದಿರುವುದು ಸಹಜವೇ.

	ಊರು ಎಂಬ ಶಬ್ದದಿಂದ ಗ್ರಾಮ ರಚನೆಯ ಮೂಲವನ್ನು ಗುರುತಿಸಬಹುದಾಗಿದೆ. ಅಲೆದಾಟದಲ್ಲಿ ಜೀವಿಸುವ ಜನಾಂಗಗಳು. ಅನುಕೂಲವಾದ ಸ್ಥಳವನ್ನು ಕಂಡು ತಳ ಊರಿದ್ದೇ ಊರು. ಅನುಕೂಲವಾದ ಸ್ಥಳವೆಂದರೆ ಎಂಥದು ? ತಾನು ಉತ್ತಿಬಿತ್ತಿ ಬೆಳೆದುಕೊಳ್ಳುವ ಹೊಲಕ್ಕೆ ಸಮೀಪವಾಗಿ, ಇಡಿಯ ವರ್ಷ ನೀರಿನ ಸೌಕರ್ಯವುಳ್ಳ ಹಳ್ಳದ ದಂಡೆಯಲ್ಲಿರುವ ಬೀಡು ವಸತಿಗೆ ಅತಿ ಅನುಕೂಲವಾದ ಸ್ಥಳವೆನ್ನಬಹುದು. ಹಲವು ಬೀಡುಗಳನ್ನು ಒಳಗೊಂಡಿದ್ದೇ ಹಳ್ಳಿ. ಹಳ್ಳದ ದಂಡೆಯಲ್ಲಿ ಹಳ್ಳಿ, ಹೊಳೆಯ ತೀರದಲ್ಲಿ ಹೊಳಲು, ನಗರವನ್ನಾಶ್ರಯಿಸಿ ನಗರ ಹುಟ್ಟಿಕೊಂಡವೆನ್ನಬಹುದು. ಊರು, ಹಳ್ಳಿ, ಗ್ರಾಮ ಇವೆಲ್ಲ ಹೆಚ್ಚು ಕಡಿಮೆಯಾಗಿ ಒಂದೇ ಅರ್ಥ ಕೊಡುವ ಶಬ್ದಗಳಾಗಿವೆ.

	ಕೃಷಿಯೇ ಗ್ರಾಮದ ಜನರ ಕೇಂದ್ರ ವೃತ್ತಿಯಾದಾಗ ಒಕ್ಕಲಿಗನ ಕೆಲಸಬೊಗಸೆಯೆಲ್ಲ ಹೊಲದಲ್ಲಿ. ಆತ ದುಡಿದು ಶ್ರಮಿಸುವುದು ದನಗಳೊಡನೆ. ಆತನಿಗೆ ಭೂಮಿಯೇ ತಾಯಿ, ಆಕಾಶವೇ ತಂದೆ ಎನ್ನುವುದು ಒಕ್ಕಲಿಗನ ಮಟ್ಟಿಗೆ ಸಂಪೂರ್ಣ ಸತ್ಯ. ಆದರೂ ಆತನ ಉದ್ಯೋಗಕ್ಕೆ ಬೇರೆ ಉಪಕರಣಗಳೂ ಅಷ್ಟೇ ಆವಶ್ಯಕ. ಭೂಮಿಯನ್ನು ಹದಗೊಳಿಸುವ ಕುಂಟಿ - ಕೂರಿಗೆ, ಗಳೇ - ಗಾಡಿ, ದನಗಳನ್ನು ಕಟ್ಟಲು ಗೂಟ - ಗುದಿಗೆ - ಎಲ್ಲ ಅವನಿಗೆ ಬೇಕು. ಒಕ್ಕಲಿಗ ಮಳೆಗಾಳಿ ಬಿಸಿಲುಗಳ ಬಾಧೆ ತಡೆದುಕೊಳ್ಳುವುದಕ್ಕೆ ಬೆಚ್ಚಗೆ ಮಲಗುವುದಕ್ಕೆ ಎಂಥದಾದರೂ ಒಂದು ಆಸರೆ ಬೇಕು. ಅವುಗಳನ್ನೆಲ್ಲ ಒದಗಿಸಲು ಬಡಿಗ ಬೇಕಾದ. ಕುಡ - ಕೀಲು, ಹಾರಿ - ಕುಡುಗಿಲು ಇಲ್ಲದಿದ್ದರೆ ಒಕ್ಕಲಿಗನ ಕೆಲಸ ಸಾಗದು. ಕಂಬಾರ ಆ ಕೆಲಸವನ್ನು ವಹಿಸಿಕೊಂಡ. ಮಿಣಿ - ಬಾರಕೋಲು, ಕಾಲುಮರೆ - ಕೆರ ಒದಗಿಸಲು ಮಾದಿಗ, ಧೋರ, ಸಮಗಾರರು ಒಕ್ಕಲಿಗನ ಹತ್ತಿರವೇ ನೆಲೆಯೂರುವುದು ಅನಿವಾರ್ಯವಾಯಿತು., ಅದರಂತೆ ಗಡಿಗೆ - ಮಡಿಕೆಗಾಗಿ ಕುಂಬಾರ, ತಲೆ ಹಗುರಗೊಳಿಸಲು ಕ್ಷೌರಿಕ ಮುಂತಾದವರು ತಳವೂರಿ ಒಕ್ಕಲಿಗನನ್ನು ಆಶ್ರಯಿಸಿದರು. ಸಹಕಾರಿಗಳಾದ ಆ ಎಲ್ಲ ವೃತ್ತಿಯವರಿಗೆ ವರ್ಷದ ಪ್ರತಿಫಲವನ್ನು ಒಕ್ಕಲಿಗ ಧಾನ್ಯ ರೂಪದಿಂದಲೇ ಕೊಡಲುಪಕ್ರಮಿಸಿದ. ಹತ್ತೂರ ಹಲ್ಲುಕಡ್ಡಿ ಒಬ್ಬನ ತಲೆಭಾರ ಎನ್ನುವಂತೆ, ಹತ್ತೆಂಟು ಕೃಷಿಕ ಮನೆತನಗಳನ್ನು ಅವಲಂಬಿಸಿದ ಒಬ್ಬೊಬ್ಬ ಆಯಗಾರನಿಗೆ ವರ್ಷದ ಖರ್ಚು ಬಾಯಿಗೂಡಿ ಮಿಗುವಂತೆ ಬರತೊಡಗಿತು.

	ಒಕ್ಕಲಿಗರನ್ನು ಆಶ್ರಯಿಸಿ ಅಥವಾ ಗ್ರಾಮವನ್ನೇ ಆಧರಿಸಿ ಇರುವ ಬಡಿಗ, ಕಂಬಾರ, ಕುಂಬಾರ, ಅಗಸ, ಕ್ಷೌರಿಕ, ಹೊಲೆಯ, ಸಮಗಾರ ಮೊದಲಾದ ಹನ್ನೆರಡು ಜನರನ್ನು ಆಯಗಾರರೆನ್ನುತ್ತಾರೆ. ಅವರಿಗೆ ಒಕ್ಕಲಿಗರಿಂದ ರಾಶಿಯ ಕಾಲಕ್ಕೆ ಧಾನ್ಯ ಸಿಕ್ಕುವುದಲ್ಲದೆ, ಅವರದೇ ಆದ ವತನೀಭೂಮಿಯ ಉತ್ಪನ್ನವೂ ಬರುತ್ತದೆ. ಅಷ್ಟರಲ್ಲಿ ಅವರು ಉಂಡುಟ್ಟು, ಸಾರ್ವಜನಿಕ ಕಾರ್ಯಗಳಲ್ಲಿ ತಂತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಮಠದಯ್ಯ ಊರಲ್ಲಿ ದಿನಾಲೂ ಹಿಟ್ಟು ಬೇಡುತ್ತಾನೆ. ರೈತರಿಂದ ರಾಶಿಯ ಕಾಲಕ್ಕೆ ಧಾನ್ಯ ಪಡೆಯುತ್ತಾನೆ. ಮಠಕ್ಕೆ ಸೇರಿದ ಹೊಲವನ್ನೂ ಉಣ್ಣುತ್ತಾನೆ. ಆತನ ಕೆಲಸ ಊರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು. ಬೆಳ್ಳಿ ಬಂಗಾರಗಳಿಂದ ವಸ್ತು ಒಡವೆಗಳನ್ನು ಮಾಡಿಕೊಡುವ ಅಕ್ಕಸಾಲಿಗನೂ ಒಕ್ಕಲಿಗನಿಗೆ ಬೇಕು. ಒಕ್ಕಲಿಗ ಹೊಲಗದ್ದೆಗಳನ್ನು ಕುರಿತ ಲೆಕ್ಕವನ್ನಿಡುವ ಕರಣಿಕ, ಊರೊಳಗಿನ ನ್ಯಾಯವನ್ನು ಕಾಪಾಡಿಕೊಂಡು ಹೋಗುವ ಗೌಡ ಮೊದಲಾದವರಿಗೆ ಸರ್ಕಾರದ ಹೊಲಗಳಿರುವುದುಂಟು. ಗೌಡ ಕರಣಿಕರ ವತನಿಯ ಹೊಲಗಳಿಗಾಗಲಿ ಆಯಗಾರರ ಹೊಲಗಳಿಗಾಗಲಿ ತೀರ್ವೆ ಇರುವುದಿಲ್ಲ. ಗೌಡ, ಕರಣಿಕರು, ತಮ್ಮ ವೃತ್ತಿಯನ್ನು ನಡೆಸುವ ಸ್ಥಳಕ್ಕೆ ಚಾವಡಿಯೆನ್ನುತ್ತಾರೆ. ಅವರ ಕಾಗದ ಪತ್ರಗಳನ್ನು ಕೊಂಡೊಯ್ಯುವ ಕೆಲಸವನ್ನು ಓಲೆಕಾರರೂ ಮಾಡುತ್ತಾರೆ. ರಾತ್ರಿ ಕಾಲಕ್ಕೆ ಊರಲ್ಲಿ ಗಸ್ತಿ ತಿರುಗುವ ಗ್ರಾಮಸ್ಥರು ವಸೂಲು ಮಾಡಿದ ತೀರ್ವೆಯ ಹಣವನ್ನು ತಾಲ್ಲೂಕಿನ ಅಧಿಕಾರಿಗಳಿಗೆ ಮುಟ್ಟಿಸುವ ಸಲುವಾಗಿ ತಳವಾರ, ನಾಟಕಕಾರರೆಂಬ ವತನದಾರರಿರುತ್ತಾರೆ. ತಳವಾರರು ಖಡ್ಗಧಾರಿಗಳಾಗಿ ಆ ಹಣದ ಕಾವಲು ಮಾಡುತ್ತಾರೆ. ತೀರ್ವೆಯ ವಸೂಲಿಯ ಕಾಲಕ್ಕೆ ಗೌಡ ಕರಣಿಕರೊಡನೆ ಅಕ್ಕಸಾಲಿಗ ಚಾವಡಿಯಲ್ಲಿ ಕುಳಿತು ನಾಣ್ಯಗಳನ್ನು ಎಣಿಸುವ ಹಾಗೂ ಖೊಟ್ಟಿ ನಾಣ್ಯಗಳನ್ನು ಕಂಡುಹಿಡಿದು ಕತ್ತರಿಸಿ ಹಾಕುವ ಕೆಲಸವನ್ನು ನಿರ್ವಹಿಸುತ್ತಾನೆ. ಗ್ರಾಮದೇವತೆಯ ಪೂಜೆ - ಪುರಸ್ಕಾರಗಳನ್ನು ನಿರಂತರವಾಗಿ ನಡೆಸಿಕೊಂಡುಬರುವುದಕ್ಕೆ ಅನುಕೂಲವಾಗಲೆಂದು, ದೇವಾಲಯದ ಹೆಸರಿನಲ್ಲಿ ಹೊಲ ಬಿಟ್ಟಿರುತ್ತಾರೆ. ಅವುಗಳ ಉತ್ಪನ್ನ ಪೂಜಾರಿಗೆ ಸೇರಿದ್ದು. ಪಲ್ಲಕ್ಕಿ ಹೊರುವ, ಆಪ್ತಾಗಿರಿ ಎತ್ತುವ ದೀವಟಿಗೆ ಹಿಡಿಯುವ ಚೌರಿ ಬೀಸುವ ಕೆಲಸಗಳನ್ನು ಬೇರೆ ಬೇರೆ ಬಾಬಿನವರು ಸಾಗಿಸುತ್ತಾರೆ. ಅವರಿಗೂ ತೀರ್ವೆಯಿಲ್ಲದ ಭೂಮಿಸೀಮೆಗಳಿರುವುದುಂಟು.

	ಇದೆಲ್ಲ ಮೇಟಿಯ ವಿಸ್ತಾರ ಅಂದರೆ ಹೊಟ್ಟೆಗೆ ಬೇಕಾಗುವ ಅನ್ನದ ವಿಷಯ ಆಯಿತು. ಮನುಷ್ಯನಿಗೆ ಹೊಟ್ಟೆಯಂತೆ ಬೆನ್ನೂ ಒಂದಿರುತ್ತದೆ. ಹೊಟ್ಟೆಗೆ ಹಿಟ್ಟು ಅನಿವಾರ್ಯವಾದಂತೆ, ಬೆನ್ನಿಗೆ ಬಟ್ಟೆ ಆವಶ್ಯಕ. ಗ್ರಾಮದೊಳಗಿನ ಬಹುತರ ಹೆಣ್ಣು ಮಕ್ಕಳೆಲ್ಲ ಸುಗ್ಗಿಯ ಕಾಲದಲ್ಲಿ ಹೊಲಕ್ಕೆ ಹೋಗಿ ಗಂಡು ಮಕ್ಕಳ ಕೆಲಸದಲ್ಲಿ ನೆರವಾಗುತ್ತಾರೆ. ಕೆಲವರಿಗೆ ಇಡೀ ವರ್ಷ ಹೊಲದ ದುಡಿಮೆ ತಪ್ಪಲಾರದು. ಆದರೆ ಬೇಸಗೆಯಲ್ಲಿ ಸಾಕಷ್ಟು ಬಿಡುವು ಸಿಗುತ್ತದೆ. ಇಳಿ ವಯಸ್ಸಿನ ಹೆಣ್ಣು ಮಕ್ಕಳು ಮೊಮ್ಮಕ್ಕಳನ್ನಾಡಿಸುತ್ತ ಮಾಡುವ ಕೆಲಸವೆಂದರೆ ನೂಲುವುದು. ಗಂಡಸು ಮನೆಯ ಹೆಂಡತಿಗೆ ಹಂಜಿ ಮಾಡಿಕೊಟ್ಟು ಸಹಕರಿಸುತ್ತಾನೆ. ವಾರಾನುವಾರ ಇಲ್ಲವೆ ವರ್ಷಾನುವರ್ಷ ನೂತನ ನೂಲನ್ನು ಜನ ನೇಕಾರನಿಗೆ ಕೊಟ್ಟು ಮನೆಗೆ ಬೇಕಾಗುವ ಬಟ್ಟೆಗಳನ್ನು ನೇಯಿಸಿಕೊಳ್ಳುತ್ತಾರೆ. ಹೆಚ್ಚಾದ ನೂಲನ್ನು ಸಂತೆಗೊಯ್ದು ಮಾರುತ್ತಾರೆ.

	ಸಂತೆಯಲ್ಲಿ ಮಾರಲಿಕ್ಕೆ ಬಂದ ನೂಲಿನ ತುಕ್ಕಡಿಗಳನ್ನು ಕೊಂಡುಕೊಂಡು ಸೀಳು ಹಾಕಿಸಿ, ಬಣ್ಣ ಕಟ್ಟಿ ನೇಕಾರರಿಗೆ ಮಾರಿವ ವೃತ್ತಿಯವರಿಗೆ ಬಣಗಾರರೆನ್ನುತ್ತಾರೆ. ನೇಕಾರರು ಬಣ್ಣದ ನೂಲು ಕೊಂಡು ಸೀರೆಗಳನ್ನೂ ಬಿಳಿಯ ನೂಲಿನಿಂದ ಧೋತರ ಹಚ್ಚಡಗಳನ್ನು ನೆಯ್ದು ಸಿದ್ಧಪಡಿಸುತ್ತಾರೆ. ಅಂಥ ಬಟ್ಟೆಗಳನ್ನು ನೇಕಾರರಲ್ಲಿ ಕೊಂಡುಕೊಂಡು ಅಗತ್ಯವಿದ್ದವರಿಗೆ ಮಾರುವ ವೃತ್ತಿ ಚೆಟ್ಟಿಯರದು. ಅವರು ಕುದುರೆಯ ಮೇಲೆ ಗಂಟು ಹೇರಿಕೊಂಡು ಸಂತೆ ತಿರುಗಿ ಬಟ್ಟೆಯ ವ್ಯಾಪಾರ ಮಾಡುತ್ತಾರೆ. ನಿತ್ಯ ಜೀವನಕ್ಕೆ ಬೇಕಾದ ಬೆಲ್ಲ, ಎಣ್ಣೆ, ಉಪ್ಪು, ಮಸಾಲೆಗಳನ್ನು ಮಾರುವ ಚಿಕ್ಕ, ತಕ್ಕಡಿಯ ಅಂಗಡಿಯನ್ನು ಇಟ್ಟುಕೊಂಡವರು ಬಣಜಿಗರೆನಿಸುತ್ತಾರೆ. ಊರ ಶೆಟ್ಟರದ ಅವರು ಒಕ್ಕಲಿಗರಿಗೂ ಉಳಿದ ಉದ್ದಿಮೆದಾರರಿಗೂ ಅಡಚಣೆಯುಂಟಾದಾಗ ಹಣದ ರೂಪದಿಂದಾಗಲಿ ದಿನಸಿಯ ರೂಪದಿಂದಾಗಲಿ ನೆರವು ನೀಡುವ ಸಹಕಾರಿಗಳೂ ಹೌದು. ಈ ಸಹಕಾರಿಗಳೇ ಕಾಲಕ್ರಮೇಣ ಸಾಹುಕಾರರೆನಿಸಿದರು. ವಿವಿಧ ಉದ್ದಿಮೆದಾರರು ತಂತಮ್ಮ ಬದುಕನ್ನು ಅಗತ್ಯವಿದ್ದವರಿಗೆ ಕೊಟ್ಟು. ಅವರ ಬದುಕನ್ನು ತಾವು ತೆಗೆದುಕೊಳ್ಳುವ ವಿನಿಮಯ ವ್ಯವಹಾರವನ್ನು ಸುಗಮಗೊಳಿಸುವ ಸಂಸ್ಥೆಯೇ ಸಂತೆಯ ಸ್ವರೂಪ ತಳೆಯಿತು.

	ಕೊಂಡುಕೊಳ್ಳುವ ವ್ಯವಹಾರದಲ್ಲಿ ತಕರಾರು ಉಂಟಾದರೆ, ಇಲ್ಲವೆ ಇನ್ನಾವುದೇ ವಿಧದ ವಿರಸವುಂಟಾದರೆ ಅದನ್ನು ಸರಿಪಡಿಸುವ ಹಿರಿಯರು ಕೆಲವರಿರುತ್ತಾರೆ. ಅವರು ಇಂಥ ಜಾತಿಯವರೇ ಇರಬೇಕೆಂದಾಗಲಿ, ಶ್ರೀಮಂತರೇ ಇರಬೇಕೆಂದಾಗಲಿ ನಿಯಮವಿಲ್ಲ. ಕಲಿತವರೇ ಬೇಕೆಂಬ ಕಟ್ಟಳೆಯೂ ಇಲ್ಲ. ಮನೆಯ, ಜಂಜಾಟವಿಲ್ಲದ ಅನುಭವದಿಂದ ಪರಿಪಕ್ವಗೊಂಡ ಜನ ನ್ಯಾಯ ಪಂಚಾಯತಿಯ ವೃತ್ತಿಯನ್ನು ಕೈಕೊಂಡಿರುತ್ತಾರೆ. ವೃತ್ತಿಯೆಂದರೆ ಗಳಿಸುವ ದಾರಿಯಲ್ಲ. ಗ್ರಾಮದ ಪಂಚರು ನಿಷ್ಪಕ್ಞಪಾತ ಬುದ್ಧಿಯವರಿರುತ್ತಾರೆ. ಪೂಜಾರಿ ಪ್ರಭಣ್ಣ, ಸಮಗಾರ ನೀಲಪ್ಪ, ಹಿರೇಮುದ್ರದ ಶರಣಯ್ಯ, ಕರಣಿಕರ ವಸುದೇವ ಮುತ್ತಯ್ಯ, ಸಾತವೀರಗೌಡ - ಇವರೇ ಪಂಚರು. ಪಂಚರಿಗೆ ಪಗಾರವಿಲ್ಲ ಎನ್ನುವ ಲೋಕೋಕ್ತಿಯೇ ಇದೆ. ಅವರು ಸಾರ್ವಜನಿಕರಿಗೆ ಮಾರ್ಗದರ್ಶನ ಮಾಡುವ ರೀತಿಯೇ ಪಂಚಾಯತಿ. ಪಂಚೇತಿ ಬಂತಲ್ಲ ಎಂದು ಸಾರ್ವಜನಿಕರು ಮಿಡುಕುವಂತೆ ಬೇಟ ಮಾಡುವವರು ಅವರಲ್ಲ. ಹಲವು ಸಾರೆ ತಪ್ಪುಗಾರರಿಂದ ತಪ್ಪು ದಂಡ ವಸೂಲಿ ಮಾಡಬೇಕಾಗುವುದು. ತೀರ್ಪು ಹೇಳುವುದು ಸುಲಭ, ಅದರಂತೆ ಎರಡೂ ಪಕ್ಷಗಳು ನಡೆದುಕೊಂಡರೆ, ಮುಂದಿನದೆಲ್ಲ ಸುಗಮಗೊಳ್ಳುತ್ತದೆ. ಹೇಳಿದ ತೀರ್ಪು ಒಂದು ಪಕ್ಷದವರಿಗೆ ಸಮ್ಮತವಾಗದಿದ್ದರೆ, ಅವನನ್ನು ಒತ್ತಾಯದಿಂದ ತೀರ್ಪಿಗೆ ಬಾಗಹಚ್ಚುವ ಸಾಮಥ್ರ್ಯವೋ ನೈತಿಕ ಬಲವೋ ಪಂಚರಿಗೆ ಇರಬೇಕಾದುದು ಅತ್ಯಾವಶ್ಯಕ. ಅಂಥ ಪ್ರಸಂಗದಲ್ಲಿ ದಂಡ ಕಟ್ಟಿ ಹಣ ವಸೂಲಿ ಮಾಡಬಹುದು. ಇಲ್ಲವೆ ಅಗಸ, ಕ್ಷೌರಿಕ, ಜಂಗಮ, ಉಪಾಧ್ಯ ಮೊದಲಾದವರ ಸಹಕಾರವನ್ನು ತಡೆಹಿಡಿದು ಬಹಿಷ್ಕಾರ ಹಾಕಬಹುದು. ಅದರಿಂದ ಸಮಾಜ ಬಾಹಿರನಾದವನು ಮೆತ್ತಗಾಗಿ ದಾರಿಗೆ ಬರುತ್ತಾನೆ. ಬಹಿಷ್ಕಾರಕ್ಕೂ ಹಣಿಯದೆ, ಊರನ್ನೇ ಬಿಟ್ಟು ಹೋದರೂ ಮುಂದಿನೂರಲ್ಲಿ ಸಹ ಆತ ಕಾಲೂರಿ ನಿಲ್ಲದಂತೆ ಅವನ ಹಿಂದಿನಿಂದೇ `ವಾಳಿ ಚೀಟಿ' ಕಳಿಸುವುದುಂಟು. ಇಂಥ ನ್ಯಾಯ ನಿಷ್ಠುರ ವೃತ್ತಿಯನ್ನು ವಹಿಸಿದರೂ ಪ್ರತಿಫಲವನ್ನು ಅಪೇಕ್ಷಿಸದ ಪಂಚರ ಆ ಮನಸ್ಸು ಪವಿತ್ರವಾಗಿಯೇ ಉಳಿಯುತ್ತದೆ.

	ತಪ್ಪು ದಂಡದ ಹಣ, ಇನ್ನಾವುದೋ ವಿಧದ ಕೊಡುಗೆ ಮೊದಲಾದವುಗಳಿಂದ ಗ್ರಾಮದೇವತೆಯ ಜಾತ್ರೆ, ಸಪ್ತಾಹ, ಪುರಾನ ಪ್ರವಚನಗಳ ಕಾರ್ಯಕ್ರಮವನ್ನು ಹಾಕಿಕೊಂಡು ಜನರಲ್ಲಿ ಧಾರ್ಮಿಕ ಭಾವನೆಯನ್ನು ಕುದುರಿಸುವ ವೃತ್ತಿಗಾಗಿಯೇ ಹೇಳಿ ಮಾಡಿಸಿದಂಥ ಕೆಲವು ಉತ್ಸಾಹಿಗಳು ಗ್ರಾಮದಲ್ಲಿ ಇರುವುದುಂಟು. ಅವರು ಉದರನಿರ್ವಾಹದ ವೃತ್ತಿಯೊಂದನ್ನು ನಿರ್ವಹಿಸಿಕೊಂಡೂ ಸಮಯಾನುಸಾರ ಸಾರ್ವಜನಿಕ ಕಾರ್ಯದಲ್ಲಿ ಪ್ರವೃತ್ತರಾಗುವರು. ಊರ ಹಿರಿಯರಿಂದ ಅವರಿಗೆ ಮಾರ್ಗದರ್ಶನವಾಗಲಿ ಮೇಲ್ವಿಚಾರಣೆಯಾಗಲಿ ಸಿಗುವುದು. ಹನ್ನೆರಡು ಜನ ಆಯಗಾರರು ಬಹುತರವಾಗಿ ಊರಲ್ಲಿಯೇ ಹನ್ನೆರಡು ತಿಂಗಳಿದ್ದು ನಡೆಸುವ ವೃತ್ತಿಯನ್ನು ವಹಿಸಿಕೊಂಡಿದ್ದರಿಂದ ಮನಸ್ಸಿಗಾಗುವ ಬೇಸರ ಕಳೆಯುವುದಕ್ಕೆ ಕೆಲವರು ಸಾಯಂಕಾಲದಲ್ಲಿ ಭಜನೆಯ ಕಾರ್ಯಕ್ರಮ ಇರಿಸಿಕೊಂಡರೆ, ಕೆಲವರು ಬಯಲಾಟವನ್ನು ಕಲಿತು ಸಾರ್ವಜನಿಕರಿಗೆ ಮನೋರಂಜನೆಯನ್ನು ಒದಗಿಸುವರು. ಅದರಿಂದ ಉಭಯರಿಗೂ ಸಂತೋಷ ದೊರೆಯುವುದು. ಆಟನೋಟ, ಹಾಡು ಬಾರಿಸುವಿಕೆಗಳನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡ ಕೆಲವು ಮನೆತನಗಳೇ ಗ್ರಾಮದಲ್ಲಿ ಇರುವುದುಂಟು. ವೃತ್ತಿಯೆಂದರೆ ಆರ್ಥಿಕ ವ್ಯಾಪ್ತಿಯ ದಾರಿಯೊಂದೇ ಎಂದು ತಿಳಿಯದೆ, ಅದು ಮನಸ್ಸಿಗೆ ಆನಂದ, ಸಮಾಧಾನಗಳನ್ನು ಒದಗಿಸುವ ಉಪಾಯವೆಂದೂ ಬಗೆಯಬೇಕು. ಜಾತ್ರೆಯ ಕಾಲಕ್ಕೆ, ಕೆಲವೊಂದು ಹಬ್ಬಹರಿದಿನಗಳ ಸಂದರ್ಭದಲ್ಲಿ ಕುಸ್ತಿ, ದೈಹಿಕ ಸ್ಪರ್ಧೆಗಳನ್ನು ಇಟ್ಟುಕೊಳ್ಳುವುದರಿಂದ ಶರೀರಬಲ ಸಂವರ್ಧನೆಗೆ ಸಹಾಯವೂ ಉತ್ತೇಜನವೂ ಪ್ರಾಪ್ತವಾಗುತ್ತದೆ.

	ಗ್ರಾಮವೃತ್ತಿಗಳಿಂದ ಬದುಕು ಸುಗಮವಾಗುವುದರ ಜೊತೆಗೆ ಸಮಷ್ಟಿ ಪುರುಷನಿಗೆ ಶಾರೀರಿಕ, ಮಾನಸಿಕ, ಪ್ರಾಣಿಕ, ಧಾರ್ಮಿಕ ಸಂಸ್ಕಾರಗಳು ಅಂದರೆ ಚತುರ್ವಿಧ ಶಿಕ್ಷಣಗಳು ದೊರೆಯುವುದರಿಂದ ಪುರುಷಾರ್ಥಸಾಧನೆಗೆ ದಾರಿಯಾಗುತ್ತದೆ.

	ಸ್ವಾವಲಂಬನೆ ಪ್ರತಿ ಗ್ರಾಮದ ಗುರಿಯಾದರೂ ಎಲ್ಲ ಗ್ರಾಮಗಳೂ ಅದನ್ನು ಸಾಧಿಸಲಾರವು. ಅಂದರೆ ಎಲ್ಲ ಬಾಬುಗಳಲ್ಲೂ ಪ್ರತಿಯೊಂದು ಗ್ರಾಮವೂ ಪಕ್ಕಾ ಕೆಲಸ ಮಾಡುವುದು ಸಾಧ್ಯವಾಗದಿರಬಹುದು. ಆಗ ಸುತ್ತಮುತ್ತಣ ಹತ್ತು ಗ್ರಾಮದವರಲ್ಲಿ ಉದ್ಯೋಗದ ಹಂಚಿಕೆಯಾಗಿ ಹತ್ತೂ ಗ್ರಾಮಗಳು ಒಂದು ಮನೆಯವರಂತೆ ಬಾಳುವುದನ್ನು ಕಲಿತುಬಿಡುತ್ತಾರೆ. ಒಂದು ಹಳ್ಳಿಯ ಕುಂಬಾರ, ಮತ್ತೊಂದು ಹಳ್ಳಿಯ ಬಡಗಿ, ಮಗದೊಂದು ಹಳ್ಳಿಯ ನೇಕಾರರು ಪ್ರಸಿದ್ಧರಾಗಿ ತಮ್ಮ ಕಡೆಗೆ ಹತ್ತೂ ಹಳ್ಳಿಯವರನ್ನೂ ಆಕರ್ಷಿಸುತ್ತಾರೆ. ಒಂದು ಹಳ್ಳಿಯ ಓಜ ಮತ್ತೊಂದು ಹಳ್ಳಿಯ ಕಥೆದಾಸ (ಕೀರ್ತನಕಾರ), ಬೇರೊಂದು ಹಳ್ಳಿಯ ಬಯಲಾಟದ ತಂಡ ತಮ್ಮ ತಮ್ಮ ಪ್ರೌಢಿಮೆಯಿಂದಾಗಿ ಅನಿವಾರ್ಯವೆನಿಸಿಬಿಡುತ್ತದೆ. ಹತ್ತೂ ಹಳ್ಳಿಯವರು ಅವರ ಹತ್ತಿರಕ್ಕೆ ಹೋಗುತ್ತಾರೆ. ಅವರನ್ನೇ ಆಹ್ವಾನಿಸುತ್ತಾರೆ. ಹೀಗಾಗಿ ಕಾಲಕ್ರಮದಲ್ಲಿ ಗ್ರಾಮವೃತ್ತಿಗಳಲ್ಲಿ ವಿಂಗಡಣೆ ವೈಶಿಷ್ಟ್ಯಗಳು ಹುಟ್ಟಿದುವೆನ್ನಲಾಗಿದೆ.			(ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ